ಕೋಲ I

	ಉಷ್ಣವಲಯದ ಒಂದು ಮರ. ಭಾರತ, ಬ್ರಜಿóಲ್, ಸೂಡಾನ್, ಪಶ್ಚಿಮ ಆಫ್ರಿಕಗಳಲ್ಲಿ ವಿಶೇಷ. ಸ್ಟರ್‍ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದೆ. ಇದರ ಶಾಸ್ತ್ರೀಯ ಹೆಸರು ಕೋಲ ಅಕ್ಯಮಿನೇಟ. ಇದರ ಬೀಜಗಳನ್ನು ಕೋಲ ಹಣ್ಣು ಎನ್ನುತ್ತಾರೆ. ವಾಸ್ತವವಾಗಿ ಹಣ್ಣು ಒಂದು ಬಿರಿಸುಕಾಯಿ. ಹಣ್ಣು ನಕ್ಷತ್ರದಾಕೃತಿಯಾಗಿದ್ದು ಅದರಲ್ಲಿ ಎಂಟು ಬೀಜಗಳಿವೆ. ಬೀಜಗಳು ರಸಭರಿತವಾಗಿದ್ದು ಕೆಂಪಾಗಿ ಗುಲಾಬಿ ವಾಸನೆ ಬೀರುತ್ತವೆ. ನಮ್ಮಲ್ಲಿ ಅಡಕೆಯನ್ನು ಮಾರುವಂತೆ ಕೋಲ ಹಣ್ಣುಗಳನ್ನು ಇಡಿ ಇಡಿಯಾಗಿಯೂ ಪುಡಿಮಾಡಿಯೂ ಮಾರಾಟ ಮಾಡುವುದುಂಟು. ತಿನ್ನಲು ಯೋಗ್ಯವಾದ ಇವಕ್ಕೆ ಸಿಹಿ ರುಚಿಯಿದೆ. ಬೀಜದಲ್ಲಿ ಕೆಫೀನ್, ಕೋಲನಿನ್ ಎಂಬ ಸಸ್ಯಕ್ಷಾರ ಮತ್ತು ಒಂದು ಬಗೆಯ ಗ್ಲೂಕೋಸೈಡ್-ಕೋಲಾನಿನ್ ಚಂಚಲತೈಲ ಇವೆ. ಕೆಫೀನ್ ಇರುವುದರಿಂದ ಹೃದಯಕ್ರಿಯೆಯನ್ನು ಚುರುಕುಗೊಳಿಸುವ ಮತ್ತು ಆಯಾಸವನ್ನು ಪರಿಹರಿಸುವ ಗುಣ ಕೋಲ ಹಣ್ಣಿಗಿದೆ.						 (ಎಚ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ